ಮುತ್ತಿನಂತ ಮಾತು ಕೇಳಮ್ಮ | ಗುರುವಿಗೆ ನೀ ಶರಣಾಗಮ್ಮ ||
ರತ್ನದ ನಿಧಿ ಒಳಗುಂಟಮ್ಮ | ಮುಚ್ಚಿಕೊಂಡಿವೆ ಏಳು ಪದರಮ್ಮ ||
ಕಾಶಿಗ್ಹೊದರದು ಇಲ್ಲಮ್ಮ | ಕಾಸು ಕೊಟ್ಟರದು ಸಿಗದಮ್ಮ |
ನಂಬಿಕೆ ಇಟ್ಟಿರ ಬೇಕಮ್ಮ | ಸಾಧಿಸಿ ರತ್ನವ ಪಡೆಯಮ್ಮ ||
ಗಂಗಾ ಯಮುನೆಯೊಳೀಜಮ್ಮ | ಸಂಗಮದೊಳು ನೀ ಮುಳುಗಮ್ಮ ||
ನಿಶ್ಚಲಳಾಗಿರು ತಂಗ್ಯಮ್ಮ | ಅಲೆಗಳ ಹೊಡೆತ ಬಹಳಮ್ಮ ||
ನೀಲಿಯ ಗುಡ್ಡಗಳೆರಡಮ್ಮ | ನಡು ಮಧ್ಯದಿ ದಶಮ ದ್ವಾರಮ್ಮ ||
ತೈಲವಿಲ್ಲದ ಜ್ಯೋತಿ ಕಾಣಮ್ಮ | ಶಾಖವಿಲ್ಲದ ಪ್ರಕಾಶಮ್ಮ |
ತಾರೆಗಳಿಲ್ಲದ ಗಗನಿತ್ತಮ್ಮ | ಮಿಂಚದೆ ಬರಸಿಡಿಲೆರಗಿತ್ತಮ್ಮ |
ಮೋಡವಿಲ್ಲದೆ ಮಳೆ ಸುರಿದಿತ್ತಮ್ಮ | ಭೂಮಿಯಿಲ್ಲದೆ ನೀರ್ ಹರಿದಿತ್ತಮ್ಮ ||
ಶಿವ ತಾ ಕಟ್ಟಿದ ಪುರವಮ್ಮ | ಇಟ್ಟನೊಂಬತ್ತು ಕದನಮ್ಮ ||
ಕಾಣದ ಕದವೊಂದಿತ್ತಮ್ಮ | ಮೆಟ್ಟಿಲಾರನತ್ತಿ ನೋಡಮ್ಮ ||
ಮಂಗವೊಂದು ಮೂರ್ಛೆ ಹೋಗಿತ್ತಮ್ಮ | ಸಂಗಡಿಗರ ಸದ್ದಡಗಿತ್ತಮ್ಮ ||
ದೇಹಕಧಿಕ ಪುರಧೀಶಮ್ಮ | ಗುರುವು ಕನ್ನೇಶನ ವಾಸಮ್ಮ ||